ಹೇಳಲಾಗದ ಭಾವ ಸೃಷ್ಟಿಸುವ ಹಿತಾನುಭವದ ಪ್ರಸಂಗಗಳು!
ನನ್ನ ಸ್ನೇಹಿತ ಶ್ರೀಕಾಂತ ಮೆಂಚೆಸ್ಟರ್ನಿಂದ ಪ್ರತಿದಿನ ಒಂದು ಪುಟ್ಟ ಪ್ರಸಂಗವನ್ನು ಕಳಿಸುತ್ತಾರೆ. ಅವು ಏಳೆಂಟು ಸಾಲುಗಳಿಗಿಂತ ಹೆಚ್ಚಿರುವುದಿಲ್ಲ. ಓದಿ ಮುಗಿಸಿದಾಗ ಹೇಳಲಾಗದ ಒಂದು ಭಾವ ಕೆಲಕಾಲ ನಮ್ಮನ್ನು ಆವರಿಸಿರುತ್ತದೆ. ಒಂದು ವಾರದ ನಂತರ ಅವು ನೆನಪಿನಲ್ಲಿ ಉಳಿದೇ ಬಿಡುತ್ತವೆಂದು ಹೇಳಲಾಗುವುದಿಲ್ಲ. ಓದಿದಾಗ ದಕ್ಕುವ ಹಿತಾನುಭಾವದ ಖುಷಿಯೇ ಬೇರೆ. ಅಂಥ ಕೆಲವು ಪ್ರಸಂಗಗಳನ್ನು ನಿಮಗೆ ಹೇಳಬಹುದು.
– ನಿರಾಶ್ರಿತರ ಶಿಬಿರದಲ್ಲಿದ್ದವರಿಗೆ ಮನೆಯಲ್ಲಿದ್ದ ಮೂರು ಬ್ಯಾಗ್ ಹಳೆ ವಸ್ತ್ರಗಳನ್ನೆಲ್ಲ ತೆಗೆದುಕೊಂಡು ಹೋಗಿ ಕೊಟ್ಟು ಬಂದೆ. ಎಲ್ಲರೂ ಸಂತಸದಿಂದ ಅವುಗಳನ್ನು ಧರಿಸಿದರೆಂದು ಆ ಶಿಬಿರದ ಮುಖ್ಯಸ್ಥೆ ಫೋನ್ ಮಾಡಿ ತಿಳಿಸಿದಳು. ಮರುದಿನ ನಾನು ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಭಿಕ್ಷುಕಿಯೊಬ್ಬಳು ಅಲ್ಲಿಯೇ ನಿಂತಿದ್ದಳು. ಅವಳು ಧರಿಸಿದ್ದ ಬಟ್ಟೆ ಎಲ್ಲೋ ನೋಡಿದಂತಿದೆಯಲ್ಲ!? ಎಂದು ಅಂದುಕೊಂಡೆ. ಹೌದು… ನಾನೇ ಧರಿಸುತ್ತಿದ್ದುದು… ನಿನ್ನೆ ನಿರಾಶ್ರಿತರ ಶಿಬಿರಕ್ಕೆ ಹೋಗಿ ಕೊಟ್ಟು ಬಂದವುಗಳ ಪೈಕಿ ಅವಳು ಧರಿಸಿದ್ದಾಳೆ. ಆ ಭಿಕ್ಷುಕಿಯ ಹತ್ತಿರ ಹೋಗಿ, ‘ನಿನ್ನ ಬಟ್ಟೆ ಬಹಳ ಚೆನ್ನಾಗಿವೆ. ನೀನು ಚೆನ್ನಾಗಿ ಕಾಣ್ತೀಯಾ’ ಅಂದೆ. ಅವಳಿಗೆ ಅತೀವ ಸಂತಸವಾಗಿ ಕಣ್ಣೀರು ಬಂತು. ಅದೇ ಬಟ್ಟೆಯಿಂದ ಕಣ್ಣು ಒರೆಸಿಕೊಂಡಳು. ನನ್ನ ಕಣ್ಣು ತೇವವಾಗಿತ್ತು.
– ಇಂದು ನನ್ನ ಅಪ್ಪನಿಗೆ 91 ವರ್ಷಗಳು ತುಂಬಿದವು. ಆತನಿಗೆ ಕಿವಿ ಕೇಳುತ್ತಿಲ್ಲ. ಗಟ್ಟಿಯಾಗಿ ಮಾತಾಡಲು ಆಗುತ್ತಿಲ್ಲ. ಆದರೆ ಪ್ರತಿಸಲ ನನ್ನ ತಂದೆಯ ರೂಮಿಗೆ ತನ್ನ ತಾಯಿ (84 ವರ್ಷ) ಆರೋಗ್ಯ ವಿಚಾರಿಸಲು ಹೋದಾಗ, ‘ಹಲೋ ಬ್ಯೂಟಿ’ ಅಂತಾರೆ.
– ಆರು ತಿಂಗಳ ನಂತರ ಅವಳು ಅರೆಪ್ರಜ್ಞಾವಸ್ಥೆಯಿಂದ ಎದ್ದಳು. ಅವಳ ಪಕ್ಕದಲ್ಲಿದವನ ಕೆನ್ನೆಯನ್ನು ಚುಂಬಿಸುತ್ತಾ ‘ಆರು ತಿಂಗಳು ನನ್ನ ಸೇವೆ ಮಾಡಿದೆಯಲ್ಲ… ನಿನ್ನ ಋಣ ಬಹಳ ದೊಡ್ಡದು… ನಿನ್ನನ್ನು ಪ್ರೀತಿಸುವುದೊಂದೇ ಅಲ್ಲ, ಮದುವೆಯೂ ಆಗಬಹುದು ಎಂದೆನಿಸುತ್ತದೆ’ ಎಂದಳು. ಆತ ಅವಳಿಗೆ ನೀರು ಕುಡಿಸುತ್ತಾ, ಗಾಳಿ ಬೀಸುತ್ತಿದ್ದ.
– ಆತ ಪಾರ್ಟಿಯಲ್ಲಿ ಸಿಕ್ಕು, ‘ಮೇಡಂ, ಇಂದು ನಾನು ಇಲ್ಲಿ ಸೂಟು-ಬೂಟು ಹಾಕಿ ನಿಂತಿದ್ದರೆ ಅದಕ್ಕೆ ಅಂದು ನೀವು ಕೊಟ್ಟ ಕೋಟೇ ಕಾರಣ. ಅದನ್ನು ಧರಿಸಿಯೇ ನಾನು ಹಲವಾರು ಇಂಟರ್ವ್ಯೂ ಫೇಸ್ ಮಾಡಿದೆ. ಕೊನೆಗೆ ಈ ನೌಕರಿ ಸಿಕ್ಕಿತು’ ಎಂದು ವಿಸಿಟಿಂಗ್ ಕಾರ್ಡ್ ಕೊಟ್ಟ. ಅದನ್ನು ನೋಡಿದಾಗ ಅವಳಿಗೆ ಅನಿಸಿತು. ತನ್ನ ಗಂಡ ಇವನ ಕೈ ಕೆಳಗೆ ಕೆಲಸ ಮಾಡುತ್ತಿದ್ದಾನೆಂದು.
-ನನ್ನಮ್ಮ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡು ಇಂದಿಗೆ ಹದಿನೈದು ವರ್ಷಗಳಾದವು. ಕಾರು ಅಪಘಾತದಲ್ಲಿ ಆಕೆ ದೃಷ್ಟಿ ಕಳೆದುಕೊಂಡಳು. ಅದೇ ದುರಂತದಲ್ಲಿ ಅಪ್ಪ ತೀರಿ ಹೋದ. ನನಗೀಗ ಹದಿನೆಂಟು. ಅಪಘಾತ ಸಂಭವಿಸಿದಾಗ ನಾನು ಮೂರು ವರ್ಷದ ಮಗು. ರೊಟ್ಟಿ ತಟ್ಟಿ, ತರಕಾರಿ ಹೆಚ್ಚಿ, ಕುಯ್ದ ಹೂಗಳಿಂದ ಮಾಲೆ ಕಟ್ಟಿ ಅಮ್ಮ ಕಷ್ಟ ಪಟ್ಟು ದುಡಿದು ನನ್ನನ್ನು ಸಾಕಿದಳು. ನನ್ನ ಅನ್ನ, ಉಸಿರಿನಲ್ಲಿ ಅಮ್ಮ ಇದ್ದಾಳೆ.
>>>>>>>>>
ಹುಲಿಯನ್ನು ಸಾಯಿಸುವುದು ಹೇಗೆ?
ಕಳೆದ ವಾರ ಈ ಪ್ರಶ್ನೆಗೆ ಯಾರ್ಯಾರು ಹೇಗೆ ಹುಲಿಯನ್ನು ಸಾಯಿಸುತ್ತಾರೆಂಬ ಬಗ್ಗೆ ಚರ್ಚಿಸಲಾಗಿತ್ತು ತಾನೆ? ಈ ವಾರ ಹುಲಿ ಸಾಯಿಸುವ ಮತ್ತಷ್ಟು ಮಾದರಿಗಳು:
ಸಿದ್ದರಾಮಯ್ಯನವರ ಮಾದರಿ: ಹುಲಿ ಘರ್ಜಿಸುತ್ತದೆ. ‘ನಾನು ಯಡಿಯೂರಪ್ಪ, ಈಶ್ವರಪ್ಪ ಘರ್ಜಿಸಿದರೆ ಕ್ಯಾರೇ ಅಂದವನಲ್ಲ. ನೀನು ಘರ್ಜಿಸಿದರೆ ಕೇರ್ ಮಾಡ್ತೀನಾ?’ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆಗ ಹುಲಿ ತನ್ನನ್ನು ಮನುಷ್ಯರಿಗೆ ಹೋಲಿಸಿದ್ದಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತದೆ.
ಜಯಪ್ರಕಾಶ ಶೆಟ್ಟಿ ಮಾದರಿ: ಹುಲಿ ಘರ್ಜಿಸುತ್ತದೆ. ಆಗ ಜೋರಾಗಿ ‘ಕಟ್ಟೆಚ್ಚರ’ ಎಂದು ಅರುಚಬೇಕು. ಇನ್ನೇನು ತನ್ನ ಮೂತಿಗೆ ‘ಭಂಗ’ ಅಂತ ಗುದ್ದುತ್ತಾರೆಂಬುದು ಹುಲಿಗೆ ಖಾತ್ರಿಯಾಗಿ ಹೃದಯಾಘಾತದಿಂದ ಸತ್ತು ಹೋಗುತ್ತದೆ.
ಹರಿಶ್ಚಂದ್ರಗೌಡ ಮಾದರಿ: ಹುಲಿ ಘರ್ಜಿಸುತ್ತದೆ. ‘ನೀನು ಈ ರೀತಿ ಘರ್ಜಿಸಿದರೆ ಕಾಲಜ್ಞಾನಿಯಾದ ನಾನು, ನಿನ್ನ ಇಡೀ ಜಾತಕವನ್ನೇ ಜಾಲಾಡುತ್ತೇನೆ’ ಎಂದು ಜೋರಾಗಿ ಗದರಬೇಕು. ಎಲ್ಲಿ ತನ್ನ ಬಂಡವಾಳವೆಲ್ಲ ಬಯಲಾಗುತ್ತದೆ ಎಂದು ಹೆದರಿ ಹುಲಿ ಸತ್ತು ಹೋಗುತ್ತದೆ.
ದೈವಜ್ಞ ಸೋಮಯಾಜಿ ಮಾದರಿ: ಹುಲಿ ಘರ್ಜಿಸುತ್ತದೆ. ‘ನೋಡು, ನೀನು ವಾಸವಾಗಿರುವ ಕಾಡಿನ ವಾಸ್ತು ಸರಿ ಇಲ್ಲ. ಇಷ್ಟರೊಳಗೆ ವಾಸ್ತುದೋಷ ಪರಿಹರಿಸಿಕೊಳ್ಳಬೇಕಾಗಿತ್ತು. ನಿನ್ನ ಭವಿಷ್ಯಕ್ಕೆ ಇದರಿಂದ ಕುತ್ತು ಬರಲಿದೆ’ ಎಂದು ಜ್ಯೋತಿಷ್ಯಹೇಳಬೇಕು. ಹುಲಿ ಎದೆ ಬಡಿದುಕೊಂಡು ಸತ್ತು ಹೋಗುತ್ತದೆ.
ಓದುಗ ಮಿತ್ರರಾದ ಎಚ್. ಆನಂದರಾಮಶಾಸ್ತ್ರಿ ಅವರು ತಮ್ಮ ಕೆಲವು ‘ಮಾದರಿ’ಗಳನ್ನು ಕಳಿಸಿಕೊಟ್ಟಿದ್ದಾರೆ:
ನೂತನ ಪಠ್ಯಪುಸ್ತಕ ಮಾದರಿ: ಹುಲಿ ಘರ್ಜಿಸುತ್ತದೆ. ‘ಎಷ್ಟು ಘರ್ಜಿಸಿದರೂ ನಿನಗೆ ಗೋಮಾಂಸ ನೀಡುವುದಿಲ್ಲ. ಗೋಹತ್ಯೆ ನಿಷೇಧ. ನೀನು ಗೋಮಾಂಸ ಭಕ್ಷಣೆಯನ್ನು ತ್ಯಜಿಸುವುದೊಂದೇ ನಿನಗಿರುವ ದಾರಿ’ ಎಂದು ಬೋನಿನ ಹುಲಿಗೆ (ರಿಂಗ್) ಮಾಸ್ಟರ್ ಹೇಳಬೇಕು. ಹುಲಿಯು ಹತಾಶೆಯಿಂದ ಪ್ರಾಣ ಬಿಡುತ್ತದೆ.
ದೇವೇಗೌಡ ಮಾದರಿ: ಹುಲಿ ಘರ್ಜಿಸುತ್ತದೆ. ಎದುರಿಗೆ ಕುಳಿತು ತೂಕಡಿಸುತ್ತಿದ್ದಾತ ಕಣ್ಣು ಕೂಡ ಬಿಡದೆ, ಏನೂ ಆಗಿಲ್ಲವೆಂಬಂತೆ ತೂಕಡಿಕೆಯನ್ನು ಮುಂದುವರಿಸಬೇಕು. ಹುಲಿ ಮತ್ತೆಮತ್ತೆ ಘರ್ಜಿಸಿದಾಗಲೂ ತೂಕಡಿಕೆ ಮುಂದುವರಿದೇ ಇರಬೇಕು. ಅವಮಾನ ತಾಳಲಾರದೆ ಆ ಹುಲಿಯಂಥಾ ಹುಲಿಯು ಬೋನಿನೊಳಗೇ ನೆಗೆದು ಬಿದ್ದು ಖಲಾಸ್!
ಬಾಣಭಟ್ಟ ಮಾದರಿ: ಹುಲಿ ಘರ್ಜಿಸುತ್ತದೆ. ಆಗ, ‘ಕೇಳ್ರಪ್ಪೋ ಕೇಳಿ, ಯಡಿಯೂರಪ್ಪನ ಹೂಂಕಾರ ಕೇಳಿದಂತೆ ಅನ್ನಿಸಿತಲ್ವೆ?’ ಎಂದು ಪಂಚ್ ನೀಡಬೇಕು. ಯಃಕಶ್ಚಿತ್ ಆದ ಹೋಲಿಕೆಯಿಂದ ಮನನೊಂದು ಹುಲಿಯು ಜೀವಬಿಟ್ಟುಬಿಡುತ್ತದೆ.
ಸುವರ್ಣ ನ್ಯೂಸ್ ರಂಗನಾಥ ಭಾರದ್ವಾಜ್ ಮಾದರಿ: ಹುಲಿ ಘರ್ಜಿಸುತ್ತದೆ. ಕೂಡಲೇ ಕಣ್ಣಗಲಿಸಿ, ಅದನ್ನು ಕೆಕ್ಕರಿಸಿ ನೋಡುತ್ತ, ಎರಡನೇ ಸಲ ಘರ್ಜಿಸಲು ಅದಕ್ಕೆ ಅವಕಾಶ ನೀಡದೆ, ಗಟ್ಟಿ ದನಿಯಲ್ಲಿ ಗದರಿಸತೊಡಗಬೇಕು. ಆಗ ಅದು ಕಕ್ಕಾವಿಕ್ಕಿಯಾಗಿ, ಹೆದರಿ, ಹಾರ್ಟ್ಫೇಲ್ ಆಗಿ ಸತ್ತುಹೋಗುತ್ತದೆ.
>>>>>>>>>>
ರಜನಿ ಜೋಕುಗಳು ಮುಗಿದು ಹೋದವಾ? ಇಷ್ಟೇನಾ ರಜನಿ ಜೋಕುಗಳು? ಎಂದೇನಾದರೂ ನೀವು ಯೋಚಿಸಿದರೆ ನಿಮ್ಮ ಊಹೆ ಸಂಪೂರ್ಣ ತಪ್ಪು. ಭೂಮಿಯಲ್ಲಿ ನೀರು ಖಾಲಿಯಾಗಬಹುದು. ಆದರೆ ರಜನಿ ಜೋಕುಗಳು ಖಾಲಿಯಾಗುವುದಿಲ್ಲ. ಮತ್ತಷ್ಟು ರಜನಿ ಜೋಕುಗಳು.
– ರಜನಿಕಾಂತ್ ವಿದ್ಯಾರ್ಥಿಯಾಗಿದ್ದಾಗ ಟೀಚರ್ಗಳೆಲ್ಲ ಕ್ಲಾಸ್ಗೆ ಚಕ್ಕರ್ ಹೊಡೆಯುತ್ತಿದ್ದರು.
– ರಜನಿಕಾಂತ್ ರೋಡ್ರೋಲರ್ ಖರೀದಿಸಿದ. ಯಾಕೆ ಗೊತ್ತಾ? ತನ್ನ ಪ್ಯಾಂಟನ್ನು ಇಸ್ತ್ರಿ ಮಾಡಲು!
– ಒಮ್ಮೆ ರೈತನೊಬ್ಬ ಹೊಲದಲ್ಲಿ ರಜನಿಕಾಂತನನ್ನು ಬೆರ್ಚಪ್ಪನನ್ನಾಗಿ ನಿಲ್ಲಿಸಿದ. ಎಲ್ಲ ಪಕ್ಷಿಗಳೂ ತಾವು ಎತ್ತಿಕೊಂಡು ಹೋದ ಕಾಳುಗಳನ್ನು ವಾಪಸ್ ತಂದು ಕೊಟ್ಟವು.
– ರಜನಿಯೇನಾದರೂ ಕಾಲ್ಸೆಂಟರ್ನಲ್ಲಿ ಕೆಲಸ ಮಾಡಿದರೆ ಕ್ಲಯಂಟ್ಗಳು ಶಿಫ್ಟ್ನಲ್ಲಿ ಕೆಲಸ ಮಾಡಬೇಕಾಗುತ್ತದೆ.
– ಮಳೆಗಾಲದಲ್ಲಿ ರಜನಿ ಕ್ರಿಕೆಟ್ ಆಡಲು ನಿರ್ಧರಿಸಿದ. ಆಟದಿಂದಾಗಿ ಮಳೆಯೇ ರದ್ದಾಯಿತು.
– ಇಂದು ರಾತ್ರಿ ಎಂಟು ಗಂಟೆಗೆ ಆಗಸದಲ್ಲಿ ರಜನಿಯನ್ನು ನೋಡಬಹುದು. ಕಾರಣ ಆತ ಓಲಿಂಪಿಕ್ಸ್ ಪಂದ್ಯದ ಹೈಜಂಪ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾನೆ.
– ರಜನಿ ಉಸಿರಾಡುವುದಿಲ್ಲ. ಗಾಳಿಯೇ ಹಾರಿ ಬಂದು ಆತನಮೂಗಿನೊಳಗೆ ಆಶ್ರಯ ಪಡೆಯುತ್ತದೆ.
– ಒಮ್ಮೆ ಕ್ಸೆರಾಕ್ಸ್ ಮಾಡಲು ರಜನಿ ಫೋಟೋವನ್ನು ಕೊಟ್ಟರೆ, ಎರಡು ಕ್ಸೆರಾಕ್ಸ್ ಮಶೀನ್ಗಳ ಕಾಪಿಗಳು ಹೊರಬಂದವು.
– ರಜನಿ ಎರಡು ಐಸ್ಕ್ಯೂಬ್ಗಳನ್ನು ಉಜ್ಜಿದರೆ ಹೊರಬರುವುದಕ್ಕೆ ಬೆಂಕಿ ಅಂತಾರೆ.
– ಮೊದಮೊದಲು ರಜನಿ ಹಲ್ಲುಜ್ಜಲು ಪೌಡರ್ ಬಳಸುತ್ತಿದ್ದ. ಅದಕ್ಕೆ ಈಗ ಅಂಬುಜಾ ಸಿಮೆಂಟ್ ಅಂತಾರೆ.
– ರಜನಿಕಾಂತ್ ಓಡಲು ಶುರು ಮಾಡಿದರೆ ಟ್ರೆಡ್ಮಿಲ್ ಸ್ಲಿಮ್ ಆಗುತ್ತದೆ.
– ರಜನಿಕಾಂತ್ ಐದು ಭಾಷೆಗಳಲ್ಲಿ ಸೀಟಿ (ವಿಶಲ್) ಹೊಡೆಯಬಲ್ಲ.
– ಫೇಸ್ಬುಕ್ನ್ನೇ ಫ್ರೆಂಡ್ ಆಗಿ ಸೆಳೆದುಕೊಳ್ಳುವುದು ರಜನಿಗೆ ಮಾತ್ರ ಸಾಧ್ಯ.
– ರಜನಿ ಕೆಬಿಸಿ ಹಾಟ್ಸೀಟ್ನಲ್ಲಿ ಕುಳಿತಿದ್ದ. ಪ್ರಶ್ನೆಗಳನ್ನು ಕೊಡುವಂತೆ ಕಂಪ್ಯೂಟರ್ ರಜನಿಯನ್ನೇ ಕೇಳಿತು.
———-
ದಿಲ್ಲಿಯ ಇಂಡಿಯಾ ಗೇಟ್ ಬಳಿ ಕೋಲ್ಯ ಬಾಯಿ ಬಡಿದುಕೊಳ್ಳುತ್ತಾ ಜೋರಾಗಿ, ‘ನಮ್ಮ ಪ್ರಧಾನಿ ಇದ್ದಾರಲ್ಲ, ಅವರು ಯಾವುದಕ್ಕೂ ಪ್ರಯೋಜನವಿಲ್ಲದ ಮನುಷ್ಯ, ಏಜ ್ಝಡ ್ಡಡಜಟಜಡಡ, ್ಟಠಜಟಜಡಡ’ ಎಂದು ಕೂಗುತ್ತಿದ್ದ.
ಅಲ್ಲಿಗೆ ಆಗಮಿಸಿದ ದಿಲ್ಲಿ ಪೊಲೀಸರು ಕೋಲ್ಯನ ಕೊರಳಪಟ್ಟಿ ಹಿಡಿದು, ‘ನಮ್ಮ ಪ್ರಧಾನಮಂತ್ರಿಯನ್ನು ಅವಮಾನಿಸ್ತೀಯಾ? ನಡಿ ಸ್ಟೇಷನ್ಗೆ’ ಎಂದು ಗದರಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದರು. ಆಗ ಗಾಬರಿಯಾದ ಕೋಲ್ಯ, ‘ಇಲ್ಲ ಸ್ವಾಮಿ, ನನ್ನಬಿಟ್ಟುಬಿಡಿ. ನಾನು ನಮ್ಮ ಪ್ರಧಾನಮಂತ್ರಿಯವರನ್ನುದ್ದೇಶಿಸಿ ಹಾಗೆ ಹೇಳಿಲ್ಲ. ಬ್ರಿಟನ್ ಪ್ರಧಾನಿ ಇದ್ದಾರಲ್ಲ, ಅವರಿಗೆ ್ಡಡಜಟಜಡಡ, ್ಟಠಜಟಜಡಡ, ನಿಕಮ್ಮಾ ಎಂದು ಬೈದೆ. ನಮ್ಮವರು ಹಾಗಲ್ಲವಲ್ಲ. ನಾನು ಹೇಳಿದ್ದು ಬ್ರಿಟನ್ ಪ್ರಧಾನಿ ಬಗ್ಗೆ’ ಎಂದು ಪರಿಪರಿಯಾಗಿ ಬೇಡಿಕೊಂಡ.
ದಿಲ್ಲಿ ಪೊಲೀಸರು ಕೋಲ್ಯನ ಕೆನ್ನೆಗೆ ಎರಡು ಬಾರಿಸಿ ಲಾಕಪ್ಗೆ ತಳ್ಳುತ್ತಾ ಹೇಳಿದರು- ‘ನಮ್ಮನ್ನು ಮೂರ್ಖರನ್ನಾಗಿ ಮಾಡ್ತೀಯಾ? ನಮಗೆ ಗೊತ್ತಿಲ್ವಾ ನೀನು ಯಾವ ಪ್ರಧಾನಿಯನ್ನುಉದ್ದೇಶಿಸಿ ಹಾಗೆ ಹೇಳಿದ್ದು ಅಂತ.’
>>>>>>>>>
ವಕ್ರತುಂಡೋಕ್ತಿ
ಮಾತು ಆಡಿದರೆ ಹೋಯಿತು. ಮುತ್ತು ‘ಕೊಟ್ಟರೆ’ ಹೋಯಿತು.
– ವಿಶ್ವೇಶ್ವರ ಭಟ್